ಜ್ಯೋತಿಷ್ಯ ಸಾರಸಂಗ್ರಹ/ Jyotishya Sarasangraha - Kannada Astrology Books
Updated: Apr 22
ಲೇಖಕರು: ಎಂ. ರಾಮಸ್ವಾಮಿ
ಈ ಜ್ಯೋತಿಷ್ಯ ಸಾರಸಂಗ್ರಹದಲ್ಲಿ ಹನ್ನೆರಡು ಪ್ರಕರಣಗಳಿವೆ;
೧. ಗ್ರಹಕಾರಕ ಪ್ರಕರಣ ;
೨. ಷಡ್ವರ್ಗ ಮತ್ತು ಭಾವ ಪ್ರಕರಣ ;
೩. ಲಗ್ನ ಪ್ರಕರಣ ;
೪. ನಕ್ಷತ್ರ ಮತ್ತು ರಾಶಿ ಪ್ರಕರಣ ;
೫. ಗ್ರಹರಾಶಿ ಶೀಲ ಪ್ರಕರಣ ;
೬. ಗ್ರಹದೃಷ್ಟಿ ಮತ್ತು ಸಮಾಗಮ ಪ್ರಕರಣ ;
೭. ದಶಾಂತರ್ದಶಾ ಪ್ರಕರಣ ;
೮. ರಾಜಯೋಗಾದಿ ಪ್ರಕರಣ ;
೯. ಅಷ್ಟಕವರ್ಗ ಪ್ರಕರಣ ;
೧೦. ಸ್ತ್ರೀಜಾತಕ ಪ್ರಕರಣ ;
೧೧. ಪ್ರಶ್ನಶಾಸ್ತ್ರ ಪ್ರಕರಣ ;
೧೨. ಪರಿಶಿಷ್ಟ ಪ್ರಕರಣ.
ಮೇಲ್ಕಂಡ ದ್ವಾದಶ ಪ್ರಕರಣಗಳು ದ್ವಾದಶರಾಶಿಗಳ ಅಧಿಪತಿಗಳಾದ ನವಗ್ರಹಗಳ ಅಭಿಮಾನದೇವತೆಗಳಿಗೆ ಅರ್ಪಣೆಗಳಾಗಲೆಂದು ಆಶಿಸುತ್ತೇನೆ.
ಒಂದನೆಯ ಪ್ರಕರಣವಾದ ಗ್ರಹಕಾರಕ ಪ್ರಕರಣದಲ್ಲಿ ಗ್ರಹಗಳ ನೈಸರ್ಗಿಕ ಸ್ವಭಾವಗಳೂ ಮತ್ತು ಗ್ರಹಗಳು ಯಾವ ಯಾವ ವಿಷಯಗಳನ್ನು ಸೂಚಿಸುತ್ತವೆಯೆಂಬುದು ವಿವರಿಸಲ್ಪಟ್ಟಿದೆ.
ಎರಡನೆಯದಾದ ಷಡ್ವರ್ಗ ಮತ್ತು ಭಾವ ಪ್ರಕರಣದಲ್ಲಿ ಲಗ್ನಾದಿ ಷಡ್ವರ್ಗಗಳು ಅಥವಾ ಆರು ಭಾಗಗಳನ್ನು ನಿರ್ಣಯಿಸುವ ಕ್ರಮ ಮತ್ತು ದ್ವಾದಶಭಾವಗಳು ಸೂಚಿಸುವ ವಿಷಯಗಳೂ, ದ್ವಾದಶಭಾವಗಳಲ್ಲಿ ಗ್ರಹಗಳಿದ್ದರೆ ಉಂಟಾಗುವ ಫಲಗಳೂ ನಿರೂಪಿತವಾಗಿವೆ.
ಮೂರನೆಯದಾದ ಲಗ್ನಪ್ರಕರಣದಲ್ಲಿ ಮೇಷ, ವೃಷಭಾದಿ ದ್ವಾದಶಲಗ್ನಗಳಲ್ಲಿ ಹುಟ್ಟಿದವರ ಸ್ವಭಾವಗಳು ಪರಿಶೀಲಿಸಲ್ಪಟ್ಟಿರುವುದಲ್ಲದೆ, ಆಯಾ ಲಗ್ನಗಳಿಗೆ ಯೋಗಕಾರಕರೂ ಮತ್ತು ಮಾರಕರೂ ಯಾವ ಗ್ರಹಗಳಾಗುತ್ತಾರೆ ? ಮತ್ತು ಅವರು ತಮ್ಮ ದೆಶೆಗಳಲ್ಲಿ ಯಾವ ರೀತಿ ಫಲಗಳನ್ನು ಕೊಡುತ್ತಾರೆ ಎಂಬ ವಿಚಾರಗಳೆಲ್ಲಾ ಉದಾಹರಣೆಗಳ ಮೂಲಕ ವಿವರಿಸಲ್ಪಟ್ಟಿದೆ.
ನಾಲ್ಕನೆಯದಾದ ನಕ್ಷತ್ರ ಮತ್ತು ರಾಶಿ ಪ್ರಕರಣದಲ್ಲಿ ಇಪ್ಪತ್ತೇಳು ನಕ್ಷತ್ರಗಳಲ್ಲಿ ಹುಟ್ಟಿದವರ ಸಾಮಾನ್ಯ ಸ್ವಭಾವಗಳು ವಿವರಿಸಲ್ಪಟ್ಟಿರುವುದಲ್ಲದೆ ಮೇಷಾದಿ ದ್ವಾದಶ ರಾಶಿಗಳಲ್ಲಿ ಚಂದ್ರನಿರುವಾಗ ಹುಟ್ಟಿದವರ ಸ್ವಭಾವಗಳೂ ತಿಳಿಸಲ್ಪಟ್ಟಿವೆ.
ಅನಂತರ ಐದನೆಯದಾದ ಗ್ರಹರಾಶಿಶೀಲ ಪ್ರಕರಣದಲ್ಲಿ ನವಗ್ರಹಗಳು ಬೇರೆ ಬೇರೆ ರಾಶಿಗಳಲ್ಲಿದ್ದರೆ ಪ್ರತ್ಯೇಕವಾದ ಫಲಗಳನ್ನು ಯಾವ ರೀತಿ ಕೊಡುತ್ತಾರೆಂಬುದನ್ನು ವಿವರಿಸಿದೆ. ಆರನೆಯ ಪ್ರಕರಣವಾದ ಗ್ರಹದೃಷ್ಟಿ ಮತ್ತು ಸಮಾಗಮ ಪ್ರಕರಣದಲ್ಲಿ ಹಿಂದಿನ ಪ್ರಕರಣದಲ್ಲಿ ತಿಳಿಸಿರುವ ಗ್ರಹರಾಶಿ ಶೀಲಗಳು ಯಾವ ರೀತಿ ಗ್ರಹಗಳು ಒಂದೇ ರಾಶಿಯಲ್ಲಿರುವುದರಿಂದಲೂ, ಪರಸ್ಪರ ಒಬ್ಬರನ್ನೊಬ್ಬರು ನೋಡುವುದರಿಂದಲೂ, ಮಾರ್ಪಾಟನ್ನು ಹೊಂದುತ್ತವೆಂಬುದು ಕೂಲಂಕಷವಾಗಿ ವಿವರಿಸಲ್ಪಟ್ಟಿದೆ.
ಏಳನೆಯದಾದ ದಶಾಂತರ್ದಶಾ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ಜನನಕಾಲದ ನಕ್ಷತ್ರಕ್ಕನುಗುಣವಾದ ಪರಾಶರೋಕ್ತ ಉಡು ಅಥವಾ ನಕ್ಷತ್ರ ದೆಶೆಗಳನ್ನೂ ಅವುಗಳಲ್ಲಿನ ಭುಕ್ತಿ ಮತ್ತು ಅಂತರ್ಭುಕ್ತಿಗಳೇ ಮೊದಲಾದ ಭಾಗಗಳನ್ನೂ ಕಂಡುಹಿಡಿಯುವ ಕ್ರಮಗಳೂ, ಮತ್ತು ಗ್ರಹಗಳು ತಮ್ಮ ತಮ್ಮ ದಶಾಂತರ್ದೆಶೆ ಅಥವಾ ಭುಕ್ತಿಗಳಲ್ಲಿ ಯಾವ ರೀತಿ ಜಾತಕರಿಗೆ ಫಲಗಳನ್ನು ಕೊಡಬಹುದು. ಎಂಬ ವಿಷಯಗಳನ್ನು ಸಮಗ್ರವಾಗಿ ಉದಾಹರಣೆಗಳ ಮೂಲಕ ವಿವರಿಸಲಾಗಿದೆ.
ಎಂಟನೆಯದಾದ ರಾಜಯೋಗಾದಿ ಪ್ರಕರಣದಲ್ಲಿ 'ಬೃಹಜ್ಜಾತಕದಲ್ಲಿ ಕೊಟ್ಟಿರುವ 'ರಾಜಯೋಗ', 'ನಾಭಸ' ಮತ್ತು 'ಚಾಂದ್ರಯೋಗ'ಗಳೆಲ್ಲಾ ಚರ್ಚಿ ಸಲ್ಪಟ್ಟಿರುವುದಲ್ಲದೆ, ಪ್ರತಿಯೊಂದು ಯೋಗಕ್ಕೂ ಸಾಧ್ಯವಾದ ಮಟ್ಟಿಗೆ ಉದಾಹರಣೆಗಾಗಿ ಪ್ರಸಿದ್ದ ವ್ಯಕ್ತಿಗಳ ಕುಂಡಲಿ ಗಳನ್ನು ಕೊಟ್ಟಿರುವುದಲ್ಲದೆ ಆ ಕುಂಡಲಿಗಳನ್ನೂ ಸಹ ವಿವರಿಸಿದೆ.
ಒಂಬತ್ತನೆಯದಾದ ಅಷ್ಟಕವರ್ಗ ಪ್ರಕರಣದಲ್ಲಿ ಗ್ರಹಗಳು ಬೇರೆಬೇರೆ ರಾಶಿಗಳಲ್ಲಿ ಸಂಚಾರಮಾಡುವಾಗ ಪ್ರತ್ಯೇಕವಾದ ಫಲಗಳನ್ನು ಹೇಗೆ ಕೊಡುತ್ತವೆಯೆಂಬುದು ಬಿಂದುರೂಪದಲ್ಲಿ ವಿವರಿಸಲ್ಪಟ್ಟಿದೆ.
ಹತ್ತನೆಯದಾದ ಸ್ತ್ರೀಜಾತಕ ಪ್ರಕರಣದಲ್ಲಿ ಸ್ತ್ರೀಯರಿಗೆ ಸಂಬಂಧಿಸಲ್ಪಟ್ಟ ಸೌಮಂಗಲ್ಯಾದಿ ವಿಷಯಗಳು ವಿವರವಾಗಿ ತಿಳಿಸಲ್ಪಟ್ಟಿವೆ.
ಹನ್ನೊಂದನೆಯದಾದ ಪ್ರಶ್ನಶಾಸ್ತ್ರ ಪ್ರಕರಣದಲ್ಲಿ ನಿಮ್ಮ ಮಾಸ ವರ್ಷ ದೆಶಗಳೂ ಪ್ರಶ್ನಕಾಲದ ಲಗ್ನಬಲದಿಂದ ಫಲಗಳನ್ನು ಊಹಿಸುವ ಕ್ರಮವೂ ವಿವರಿಸಲ್ಪಟ್ಟಿದೆ.
ಕೊನೆಯದಾಗಿ, ಹನ್ನೆರಡನೆಯದಾದ ಪರಿಶಿಷ್ಟ ಪ್ರಕರಣದಲ್ಲಿ ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಧಪಟ್ಟಿರುವ ಸರ್ವರೂ ತಿಳಿದುಕೊಂಡಿರಬೇಕಾದ ಮೂಲವಿಷಯಗಳನ್ನು ಕೋಷ್ಟಕಗಳ ಮೂಲಕ ವಿವರವಾಗಿ ತಿಳಿಸಲಾಗಿದೆ.
ಈ ಜ್ಯೋತಿಷ್ಯ ಸಾರಸಂಗ್ರಹದಲ್ಲಿದಲ್ಲಿ ತಿಳಿಸಿರುವ ವಿಷಯಗಳು ಯಾವ ಯಾವ ಪ್ರಸಿದ್ಧವಾದ ಜ್ಯೋತಿಷ್ಯಗ್ರಂಥಗಳಿಂದ ಸಂಗ್ರಹಿಸಲ್ಪಟ್ಟಿವೆಯೆಂಬುದನ್ನೂ ಓದುಗರ ಮುಂದಿಡಲು ಆ ಗ್ರಂಥಗಳಲ್ಲಿನ ಕೆಲವು ಮುಖ್ಯವಾದ ಶ್ಲೋಕಗಳನ್ನೂ ಕೊಡಲಾಗಿದೆ. ಜ್ಯೋತಿಶ್ಯಾಸ್ತ್ರವನ್ನು ಪ್ರಥಮತಃ ಅಭ್ಯಾಸ ಮಾಡುವವರು ಮೊದಲು, ಈ ಪರಿಶಿಷ್ಟ ಪ್ರಕರಣವನ್ನು ಓದಿ, ಅಲ್ಲಿ ಕೊಟ್ಟಿರುವ ವಿಷಯಗಳನ್ನೆಲ್ಲಾ ಮನನ ಮಾಡಿಕೊಂಡನಂತರ, ಉಳಿದ ಪ್ರಕರಣಗಳನ್ನು ಓದಿದರೆ, ಶಾಸ್ತ್ರೀಯ ವಿಚಾರಗಳು ಹೆಚ್ಚು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗುತ್ತದೆಯೆಂದು ಹೇಳಬಹುದು. ಒಟ್ಟಿನಲ್ಲಿ ದ್ವಾದಶರಾಶಿಗಳ ಅಧಿಪತಿಗಳಾದ ನವಗ್ರಹಗಳ ಪ್ರೇರಣೆಯಿಂದ, ದ್ವಾದಶಮಾಲಿಕಾ, ದ್ವಾದಶಾದಿತ್ಯರಂತೆ ಒಬ್ಬ ವ್ಯಕ್ತಿಯ ಜಾತಕದಲ್ಲಿ ಆಮುತ್ಮಿಕಕ್ಕೆ ಪ್ರಧಾನವಾದ ಮೋಕ್ಷಸ್ಥಾನವನ್ನು ಸೂಚಿಸುವ, ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ವಿಶೇಷವಾದ ಮಹತ್ವವನ್ನು ಹೊಂದಿರುವ ಹನ್ನೆರಡು ಅಥವಾ ದ್ವಾದಶ ಪ್ರಕರಣಗಳನ್ನೊಳಗೊಂಡಿರುವ ಈ 'ಜ್ಯೋತಿಷ್ಯಸಾರಸಂಗ್ರಹ ವೆಂಬ ಗ್ರಂಥವನ್ನು ಕನ್ನಡ ಜನತೆಯ ಮುಂದಿಟ್ಟು ಕನ್ನಡ ನಾಡಿನ ಮಹಾಜನರಿಗೆ ಜ್ಯೋತಿಶ್ಯಾಸ್ತ್ರದಲ್ಲಿ ವಿಶ್ವಾಸ ಮತ್ತು ಪರಿಚಯ ಇತೋಪ್ಯತಿಶಯವಾಗಿ ಉಂಟಾಗಲೆಂದು ಹಾರೈಸುತ್ತೇವೆ.
Opmerkingen