top of page

ಜ್ಯೋತಿಷ್ಯ ರತ್ನ ಮಾಲಾ / Jyotishya Ratna Maalaa


ಲೇಖಕರು ಈ ಗ್ರಂಥದಲ್ಲಿ ಕೊಟ್ಟಿರುವ ಜ್ಯೋತಿಷ್ಯ ಫಲಗಳು, ನಡೆ, ನುಡಿ, ರಚನೆ ಮುಂತಾದವುಗಳು ಬಹಳ ಶ್ಲಾಘನೀಯ, "ಜ್ಯೋತಿಷ್ಯ ರತ್ನಮಾಲಾ'' ಎಂಬ ನಾಮಧೇಯವುಳ್ಳ ಈ ಗ್ರಂಥದಲ್ಲಿ ನವಗ್ರಹಗಳು, ದ್ವಾದಶ ರಾಶಿಗಳು, ಮುನ್ನೂರ ಅರವತ್ತು ಡಿಗ್ರಿಗಳ ವ್ಯಾಪ್ತಿಯಲ್ಲಿ ಚಲಿಸುವ ಗ್ರಹಗಳ ಫಲಾಫಲಗಳನ್ನು ಮಾನವನ ಜನ್ಮ-ಜೀವನ-ಜೀವನ ಮುಕ್ತಿ ಬಗ್ಗೆ ಶ್ರೀಯುತ ಶ್ರೀನಿವಾಸಮೂರ್ತಿ ಕಣಗಾಲ್ ಎಸ್. ರವರು ತಿಳಿಸಿದ್ದಾರೆ. ಜನ್ಮ ಮತ್ತು ಜೀವನಮುಕ್ತಿಯ ನಡುವಿನ ಅಂತರವೇ ಜೀವನ, ಜೀವನದ ಆಗುಹೋಗುಗಳು, ಏಳು-ಬೀಳುಗಳು, ಶುಭಾಶುಭ ಫಲಗಳನ್ನು ಜ್ಯೋತಿಷ್ಯದಿಂದ ತಿಳಿದು ಅದಕ್ಕೆ ತಕ್ಕ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಈಗಿನ ಆಧುನಿಕ ಕಾಲಕ್ಕೆ "ಜ್ಯೋತಿಷ್ಯ ರತ್ನಮಾಲಾ" ಎಂಬ ಈ ಗ್ರಂಥವು ಒಂದು ಸವಾಲನ್ನು ಹಾಕುತ್ತಿದೆ. ಜ್ಯೋತಿಷ್ಯ ಗ್ರಂಥಗಳು ಸಂಪೂರ್ಣ ಸಂಸ್ಕೃತ ಮೂಲದಿಂದಿದ್ದು ಶ್ಲೋಕಗಳಿಂದ ಕೂಡಿರುವುದು. ಶ್ರೀಯುತರು ಜನಸಾಮಾನ್ಯರಿಗೂ ಅರ್ಥವಾಗುವಂತೆ ಭಾವ, ತಾತ್ಪರ್ಯಗಳನ್ನು ವಚನ ರೂಪದಲ್ಲಿ ಕೊಟ್ಟಿರುವುದು ನಿಜಕ್ಕೂ ಮೆಚ್ಚತಕ್ಕದ್ದು.ಜೀವನವು ಜನ್ಮದ ಒಂದು ಪ್ರಕ್ರಿಯೆ, ಅದರ ಉತ್ಪತ್ತಿ, ವಾಸ, ಪರಿಸರಕ್ಕೆ ಗ್ರಹಗಳ ಪ್ರಭಾವವನ್ನು ನೋಡಿದರೆ ಇಂದಿನ ವೈಜ್ಞಾನಿಕ ಕಾಲದಲ್ಲೂ ವೈದ್ಯಕೀಯ ವೃತ್ತಿಗೂ ಒಂದು ಸವಾಲೆನಿಸುತ್ತದೆ. ವೈದ್ಯಪದ್ಧತಿಯಲ್ಲಿ ಕಾಣಬರದೇ ಇರುವ ಕೆಲವು ರೋಗಗಳನ್ನು ಜ್ಯೋತಿಷ್ಯದಲ್ಲಿ ತಿಳಿಯಬಹುದು. ಜ್ಯೋತಿಷ್ಯದಲ್ಲಿರುವ ಪರಿಹಾರಗಳ ಅನುಸಾರ ಜಾತಕರು ಉತ್ತಮ ಶುಭಾಶುಭ ತಿಳಿದು ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳಬಹುದು ಎಂದರೆ ಇದು ವೈದ್ಯವಿಜ್ಞಾನಕ್ಕೆ ಸವಾಲೇ ಸರಿ. ಶಿಶುವಿನ ಜನ್ಮಕಾಲದಲ್ಲಿ ಪ್ರಥಮವಾಗಿ ಶಿರವೋ ಅಥವಾ ಪೃಷ್ಟವೋ ಅಥವ ಕಾಲು ಕೈಗಳೋ ಅಥವಾ ಮಾತೃವಿನ ಉದರ ಕೊಯ್ಯುವುದೋ, ಅಥವಾ ಶಿಶುವು ಬದುಕುಳಿಯುವುದೋ, ಮಾತೃವಿಗೆ ಶಿಶುವಿನ ಜನನದ ನಂತರ ಉಂಟಾಗತಕ್ಕ ಶುಭ ಅಥವ ಅಶುಭ ಫಲಗಳನ್ನು ಗ್ರಹಗಳ ಮೂಲಕ ತಿಳಿದುಕೊಳ್ಳಬಹುದಾದ ವಿಷಯಗಳನ್ನು ತಿಳಿಸಿರುವುದು ಮೆಚ್ಚತಕ್ಕದ್ದು.


ಇದನ್ನು ವೈಜ್ಞಾನಿಕವಾಗಿ ತೋರಿಸಲು ವಿಜ್ಞಾನ ಸಂಶೋಧಕರು ಪ್ರಯತ್ನ ನಡೆಸಬಹುದು. ಇಷ್ಟೇ ಅಲ್ಲದೆ ಮಾತಾಪಿತೃವಿನ ಆಯಸ್ಸು - ಆರೋಗ್ಯ, ಅಭಿವೃದ್ಧಿ ಮುಂತಾದವುಗಳನ್ನು ಶಿಶುವಿನ ಜನ್ಮ ಕಾಲದ ಗ್ರಹಸ್ಥಿತಿಗಳಿಂದ ತಿಳಿದುಕೊಳ್ಳಬಹುದು ಎಂಬ ವಿಚಾರವನ್ನು ಶ್ರೀಯುತರು ತಿಳಿಸಿರುವುದು ಸ್ವಾಗತಾರ್ಹ ಹಾಗೂ ನಂಬಲರ್ಹವಾದುದು. ಪರಮೇಶ್ವರನು ಪಾರ್ವತಿಗೆ ತಿಳಿಸಿದಂತೆ ಜ್ಯೋತಿಷ್ಯವು ಒಂದು ಆಧಾರವಾಗಿರುವುದು. ಈ ಗ್ರಂಥವು ಓದುವರಿಗೂ, ಅಭ್ಯಾಸಿಗಳಿಗೂ, ವಾಚಕರಿಗೂ, ಭೋದಕರಿಗೂ ಬಹು ಉಪಕಾರವಾಗಿರುತ್ತದೆ. ಜನ್ಮ ವೃತ್ತಾಂತದಲ್ಲಿನ ಬೆಳವಣಿಗೆ ವೃತ್ತಿ. ವಿವಾಹ, ಸಂತಾನ, ಸಂಸಾರಿಕ ಜೀವನ ಅತಿಮುಖ್ಯವಾದುದು. ಈ ವಿಷಯಗಳನ್ನು ಗ್ರಂಥದಲ್ಲಿ ತಿಳಿಸುವ ಪ್ರಯತ್ನವನ್ನು ಲೇಖಕರು ಮಾಡಿರುತ್ತಾರೆ. ಇಷ್ಟಲ್ಲದೆ ಸ್ನೇಹ- ಸಂಬಂಧ, ಶತೃತ್ವ ಮಿತ್ರತ್ವ ಆಯವ್ಯಯ ಇವುಗಳನ್ನೂ ಸಹ ತಿಳಿಯಬಹುದು. ಈ ವಿಚಾರಗಳನ್ನು ನಮ್ಮ ಪೂರೈಜರು ಸಂಸ್ಕೃತ ಶ್ಲೋಕಗಳಲ್ಲಿ ಹೇಳಿರುವುದನ್ನು ಗ್ರಂಥಕರ್ತರು ವಿವರಿಸಿರುತ್ತಾರೆ.


ಜೀವಿಯು ಮುಕ್ತಿಯನ್ನು ಹೇಗೆ ಪಡೆಯುತ್ತದೆ ಎಂಬ ವಿಚಾರವನ್ನು ಎಂದರೆ ಜಾತಕರ ಆಯಸ್ಸಿನ ಪ್ರಮಾಣ. ಮಾತಾಪಿತೃಗಳ ಸಂಬಂಧ, ಬಂಧುಬಳಗ ಮಾತಾಪಿತೃಗಳ ವಿಯೋಗ ಅಥವಾ ಆಗಲಿಕೆಯ ಬಗ್ಗೆ ತಿಳಿಸಿರುವುದು ಸೂಕ್ತವಾಗಿದೆಯೆ ಎಂದು ಪ್ರಶ್ನಿಸಿದಾಗ ಪ್ರಸ್ತುತ ಕಾಲಕ್ಕೆ ಒಪ್ಪಿಕೊಳ್ಳುವುದು ಕಷ್ಟವೆನಿಸಿದರೂ ಒಪ್ಪಿಕೊಳ್ಳಬೇಕಾಗುತ್ತದೆ. ಕಾರಣ ಒಬ್ಬ ಜೀವಿಯ (ಜಾತಕರ) ಅಂತ್ಯವು ನಾವು ನೋಡಿದಂತೆ ಸ್ವಾಭಾವಿಕ ಮತ್ತು ಅಸ್ವಾಭಾವಿಕ, ಸ್ವಾಭಾವಿಕವೆಂದರೆ ಜಾತಕರಿಗೆ ವಯಸ್ಸಾದ ನಂತರ ಯಾವುದೇ ರೀತಿಯ ನೋವು ಖಾಯಿಲೆ-ನರಳಾಟವಿಲ್ಲದೆ ನಿರ್ಯಾಣಗೊಳ್ಳುವುದು. ಹಾಗೆಯೆಜಾತಕರ ಅಂತ್ಯವು ದುರ್ಮರಣವೇ, ಅಪಘಾತದಿಂದಲೇ ವಿಷಪ್ರಯೋಗಾದಿಗಳಿಂದಲೇ? ಆತ್ಮಹತ್ಯೆಯೇ, ಅಥವಾ ಜಂತುಗಳಿಂದುಂಟಾದುದೆ? ಕೃತ್ರಿಮಾದಿ ಅಭಿಚಾರಗಳಿಂದಲೇ? ಅಥವಾ ನಿರ್ಯಾಣದ ನಂತರ ಜಾತಕರ (ಜೀವಿಯ) ಪಾರ್ಥಿವ ಶರೀರವನ್ನು ಸುಡುವುದೆ? ಆರಣ್ಯದಲ್ಲಿ ಪಶುಪಕ್ಷಿಗಳಿಗೆ ಹಾಕುವುದೆ? ಅಥವಾ ಯಾವ ಬಗೆಯ ಸಂಸ್ಕಾರಕ್ಕೆ ಒಳಪಡುವುದು ಎಂಬೆಲ್ಲ ವಿಚಾರಗಳನ್ನು ಜನ್ಮಕಾಲದಲ್ಲಿನ ಗ್ರಹ ಸ್ಥಾನಮಾನ ಮುಂತಾದ ಪದ್ಧತಿಗಳಿಂದ ತಿಳಿಯಬಹುದಾಗಿದೆ. ಇದಕ್ಕೆ ಇಂದಿನ ವೈದ್ಯ ವಿಜ್ಞಾನಿಗಳ ಉತ್ತರ ಏನೆಂದು ತಿಳಿದುಕೊಳ್ಳಬೇಕಾಗುತ್ತದೆ.


ಈ ಗ್ರಂಥದಲ್ಲಿ ರಾಶಿ-ಲಗ್ನ-ಭಾವ ಫಲಗಳನ್ನು ವಿಷದವಾಗಿ ವಿವರಿಸಲಾಗಿದೆ. ಜತೆಗೆ ಅವುಗಳಿಗಿರುವ ದೋಷಗಳು, ಅವಕ್ಕೆ ತಕ್ಕ ಪರಿಹಾರಗಳು ಅವಕ್ಕೆ ತಕ್ಕುದಾದ ಸೂತ್ರಗಳು ಉಪಯುಕ್ತವಾಗಿದೆ. ಲಗ್ನ ಭಾವಾದಿಗಳ ಭಾಗ, ವಿಷದವಾಗಿ ಒಂದೊಂದು ಭಾವಫಲ, ಅದಕ್ಕಿರುವ ಸಂಬಂಧ ಭಾವಕ್ಕಿರುವ ಗ್ರಹ ಸಂಬಂಧ ದೃಷ್ಟಿ, ದೋಷ ಪರಿಹಾರಗಳನ್ನು ಈ ಗ್ರಂಥದಿಂದ ತಿಳಿಯಬಹುದಾಗಿದೆ. ಈ ಗ್ರಂಥದಲ್ಲಿ ರಾಶಿಗಳಿಂದ ದ್ವಾದಶ ಭಾವಫಲಗಳು - ಹಾಗೆಯೇ ಲಗ್ನಾದಿ ದ್ವಾದಶ ಭಾವಫಲಗಳನ್ನು ವಿವರಿಸಿರುವುದು ಅತ್ಯಂತ ಸೂಕ್ತವಾದುದು.13 views0 comments

Commentaires


Log In to Connect With Members
View and follow other members, leave comments & more.

Best sellers